ಮಣ್ಣಿನ ಬೊಂಬೆಗಳು -
ಭಾರತದಲ್ಲಿ ಬೊಂಬೆಗಳ ತಯಾರಿಕೆ ಪ್ರಾಚೀನ ಕಾಲದಿಂದಲೂ ಬೆಳೆದುಬಂದಿರುವ ಒಂದು ಉಪಯುಕ್ತ ಕಲೆ. ಬೊಂಬೆಗಳನ್ನು ಮರ, ಬಟ್ಟೆ, ಹತ್ತಿ, ರಬ್ಬರ್, ಗಾಜು, ಪ್ಲಾಸ್ಟಿಕ್, ಮೇಣ, ಲೋಹ ಮುಂತಾದ ವಸ್ತುಗಳಿಂದ ತಯಾರಿಸುತ್ತಾರೆ. ಮಣ್ಣಿನಿಂದ ತಯಾರಿಸಿದ ದೇವರ ವಿಗ್ರಹಗಳು ಪೂಜೆಗೆ ಅರ್ಹವಾದವೆಂಬ ನಂಬಿಕೆ ಇರುವುದರಿಂದ ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಲಭಿಸಿದೆ. ಬೊಂಬೆಗಳ ತಯಾರಿಕೆಯಲ್ಲಿ ಹಲವು ಬಗೆಯ ಮತ್ತು ಹಲವು ಬಣ್ಣದ ಮಣ್ಣುಗಳನ್ನು ಬಳಸಲಾಗುತ್ತದೆ. ಕರಿ, ಕೆಂಪು, ಬಿಳಿ ಬೂದು, ಕಂದು ಇವು ಪ್ರಮುಖ ಬಣ್ಣಗಳು ಹುತ್ತದಮಣ್ಣು, ಜೇಡಿಮಣ್ಣು, ಜಿಗುಟುಮಣ್ಣು, ಮೊದಲಾದವು ಮಣ್ಣಿನ ಮುಖ್ಯಬಗೆಗಳು. ಬೊಂಬೆ ತಯಾರಿಸುವ ಮುನ್ನ ಮಣ್ಣನ್ನು ನೀರುಹಾಕಿ ಕಲಸಿ ಹದಮಾಡಲಾಗುತ್ತದೆ. ಸ್ವಾಭಾವಿಕವಾಗಿ ದೊರೆಯುವ ಜೇಡಿಮಣ್ಣನ್ನು ಹದಮಾಡಲಾಗುತ್ತದೆ. ಸ್ವಾಭಾವಿಕವಾಗಿ ದೊರೆಯುವ ಜೇಡಿಮಣ್ಣನ್ನು ಹದಮಾಡುವ ಅಗತ್ಯವಿಲ್ಲ. ಕೆಮ್ಮಣ್ಣು ಇತ್ಯಾದಿಗಳನ್ನು ಹದಗೊಳಿಸಿ ಜಿಗುಟು ಬರುವಂತೆ ಮಾಡಲು ಕೆಲವೊಮ್ಮೆ ಕೆಲವು ರಾಸಾಯನಿಕವಸ್ತುಗಳನ್ನು ಕೂಡ ಬಳಸಲಾಗುತ್ತದೆ. ಸರಿಯಾಗಿ ಹದವಾಗದ ಮಣ್ಣಿನಿಂದ ಬೊಂಬೆ ತಯಾರಿಸಿದರೆ ಒಣಗಿಸಿದಾಗ ಅಥವಾ ಬೇಯಿಸಿದಾಗ ಅವು ಬಿರುಕು ಬಿಡುವುದರಿಂದ ಮಣ್ಣಿನ ಹದಗಾರಿಕೆ ಚೆನ್ನಾಗಿರಬೇಕಾಗುತ್ತದೆ. 

	ಭಾರತದಲ್ಲಿ ಅನೇಕ ಸ್ಥಳಗಳು ಒಂದೊಂದು ಬಗೆಯ ಬೊಂಬೆ ತಯಾರಿಕೆಗೆ ಪ್ರಸಿದ್ಧವಾಗಿವೆ. ಪಾಂಡಿಚೇರಿಯ ಬಣ್ಣ ಬಣ್ಣದ ಮಣ್ಣಿನ ಬೊಂಬೆಗಳು ಪ್ರಖ್ಯಾತವಾದವು. ಕರ್ನಾಟಕದಲ್ಲಿ ಅದರಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿ ಗೌರಿಗಣೇಶ ಬೃಹತ್ ಬೊಂಬೆಗಳು ಹಾಗೂ ಉತ್ತರ ಕರ್ನಾಟಕದಲ್ಲಿ ಗೋಕಾಕ್ ಬೊಂಬೆಗಳು ಎಂಥವರನ್ನೂ ಆಕರ್ಷಿಸುತ್ತವೆ. ಪುಣೆ, ಮುಂಬಾಯಿಯ ಮರಾಠಿ ಯುವಕ ಯುವತಿ ಬೊಂಬೆಗಳು ನೋಡಲು ಸುಂದರವಾಗಿರುತ್ತದೆ. ರಾಜಸ್ಥಾನ, ಬನಾರಸ್, ಲಖನೌ, ಮುಂತಾದ ಕಡೆಗಳಲ್ಲಿ ರಾಮಾಯಣ, ಮಹಾಭಾರತದ ಕಥೆಗೆ ಸಂಬಂಧಿಸಿದ ಪಾತ್ರಗಳ ಚಿಕ್ಕ ಚಿಕ್ಕ ಬೊಂಬೆಗಳನ್ನು ತಯಾರಿಸುವರು. ಆಂಧ್ರದ ಕೊಂಡಪಲ್ಲಿಯ ಬೊಂಬೆಗಳು ಬಂಗಾಲದ ಕೃಷ್ಣಸಾಗರದ ಬೊಂಬೆಗಳು ಬಹಳ ಪ್ರಸಿದ್ಧವಾಗಿವೆ. 

	ಮಣ್ಣಿನ ಬೊಂಬೆಗಳಲ್ಲಿ ಸೂತ್ರದ ಬೊಂಬೆಗಳದ್ದೇ ಒಂದು ವೈಶಿಷ್ಟ್ಯ. ಇವುಗಳಿಗೆ ಬಣ್ಣ ಬಳಿದು ಜರಿಯಿಂದ ಅಲಂಕಾರಮಾಡಿ, ಹಿಂಭಾಗದಲ್ಲಿ ಒಂದು ಚಿಕ್ಕ ರಂಧ್ರ ಕೊರೆದು ಅದರ ಮೂಲಕ ಎಲ್ಲ ಅವಯವಗಳು ಚಲಿಸುವಂತೆ ತಂತಿಯಿಂದ ಜೋಡಿಸಿ ಸೂತ್ರ ಸಿದ್ಧಪಡಿಸಿರುತ್ತಾರೆ; ಸೂತ್ರದ ಬೊಂಬೆಯಾಟದ ಕಲಾವಿದ ಇವನ್ನು ಕಲಾತ್ಮಕವಾಗಿ ಕುಣಿಸುತ್ತಾನೆ. 

	ಬೊಂಬೆ ತಯಾರಿಕೆ ಇತ್ತೀಚೆಗೆ ಒಂದು ಕರಕುಶಲ ಕೈಗಾರಿಕೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಸರ್ಕಾರದಿಂದಲೂ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕುತ್ತಿದೆ. ಬೊಂಬೆ ತಯಾರಿಕೆಯ ತರಬೇತಿ ಕೇಂದ್ರಗಳು ಸ್ಥಾಪಿತವಾಗಿವೆ. ಮಣ್ಣಿನ ಬೊಂಬೆಗಳಿಗೆ ಬೆಲೆ ಕಡಿಮೆ ಇರುವುದರಿಂದ ಇವುಗಳ ಮಾರುಕಟ್ಟೆಯೂ ಚೆನ್ನಾಗಿದೆ. ಇಂದು ಭಾರತದ ಬೊಂಬೆಗಳು ಪ್ರಪಂಚ ಪ್ರಸಿದ್ಧವಾಗಿದ್ದು ಪರದೇಶಗಳಲ್ಲಿಯೂ ಇವುಗಳಿಗೆ ಬೇಡಿಕೆ ಇದೆ. 
(ಜಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ